ಗುವಾಹಟಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ದರಂಗ್ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರತಿಪಕ್ಷಗಳ ಟೀಕೆ ಮತ್ತು ಅವಹೇಳನಗಳಿಗೆ ಪ್ರತಿಕ್ರಿಯಿಸಿದರು. ತಾಯಿ ಹೀರಾಬೆನ್ ಅವರನ್ನೂ ಗುರಿಯಾಗಿಸಿ ಪ್ರತಿಪಕ್ಷಗಳು ನಡೆಸಿದ ಟೀಕೆಯನ್ನು ಉಲ್ಲೇಖಿಸುತ್ತಾ, “ನಾನು ಶಿವನ ಭಕ್ತ. ಶಿವನಂತೆ ವಿಷವನ್ನು ನುಂಗುತ್ತೇನೆ. ನನ್ನ ವಿರುದ್ಧ ಮಾಡುವ ಟೀಕೆ, ಅವಹೇಳನವನ್ನು ಸಹಿಸಿಕೊಳ್ಳುತ್ತೇನೆ. ಆದರೆ ಇತರರ ಮೇಲೆ ಮಾಡಿದರೆ ಅದು ಜೋಕೆ” ಎಂದು ಪ್ರಧಾನಿ ಮೋದಿ ಸ್ಪಷ್ಟ ಸಂದೇಶ ನೀಡಿದರು.
ಮೋದಿ ಅವರು ಮುಂದುವರೆದು, “ದೇಶದ ಪ್ರತಿಯೊಬ್ಬ ನಾಗರಿಕನೇ ನನ್ನ ಯಜಮಾನ. ಅವರು ನನ್ನ ದೇವರು. ಅವರೇ ನನ್ನ ರಿಮೋಟ್ ಕಂಟ್ರೋಲ್. ನನ್ನ ಬಳಿ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ” ಎಂದು ಹೇಳಿದರು.
ಇತ್ತೀಚೆಗೆ ಬಿಹಾರದಲ್ಲಿ ನಡೆದ ಕಾಂಗ್ರೆಸ್-ಆರ್ಜೆಡಿ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ವಿರುದ್ಧ ಅವಹೇನಕಾರಿ ಘೋಷಣೆ ಕೇಳಿಬಂದಿತ್ತು. ನಂತರ ಪ್ರತಿಪಕ್ಷಗಳಿಂದ ಎಐ ತಂತ್ರಜ್ಞಾನ ಬಳಸಿ ಹೀರಾಬೆನ್ ಅವರ ವಿಡಿಯೋಗಳನ್ನು ಸೃಷ್ಟಿಸಿ ಹಂಚಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, “ಕಾಂಗ್ರೆಸ್ ತನ್ನ ರಾಜಕೀಯಕ್ಕಾಗಿ ಎಲ್ಲರನ್ನೂ ಬಳಸಿಕೊಳ್ಳುತ್ತದೆ, ಟೀಕೆ ಮಾಡುತ್ತದೆ. ನನ್ನ ತಾಯಿಯನ್ನೂ ಬಿಡಲಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಸ್ಸಾಂ ಮಣ್ಣಿನ ಗಾನ ಸಮ್ರಾಟ್, ಮಾಜಿ ಶಾಸಕ ಭುಪೇಂದ್ರ ಹಜಾರಿಕಾಗೆ ತಮ್ಮ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, “ಕಾಂಗ್ರೆಸ್ ಅದಕ್ಕೂ ವ್ಯಂಗ್ಯವಾಡಿತ್ತು. ಹಜಾರಿಕಾಗೆ ನೀಡಿದ ಪ್ರಶಸ್ತಿಯನ್ನು ಕುಣಿಯುವ, ಹಾಡುವ ಮಂದಿಗೆ ಕೊಡಲಾಗಿದೆ ಎಂದು ಕಾಂಗ್ರೆಸ್ ನಾಯಕರೇ ಹಾಸ್ಯ ಮಾಡಿದ್ದರು. ಇದು ಅಸ್ಸಾಂ ಸಂಸ್ಕೃತಿ, ಕಲಾಭಿಮಾನಿಗಳಿಗೆ ಅವಮಾನ” ಎಂದು ಹೇಳಿದರು.