ಅಯೋಧ್ಯೆ, ಅ.18: ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ರಾಮನೂರು ಅಯೋಧ್ಯೆಯೂ ಬೆಳಕಿನ ಹಬ್ಬಕ್ಕೆ ಸಜ್ಜಾಗಿದೆ. ಈ ಬಾರಿ ಅಯೋಧ್ಯೆಯಲ್ಲಿ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ದೀಪೋತ್ಸವ ನಡೆಯಲಿದ್ದು, ಸರಯೂ ನದಿಯ ತೀರದಲ್ಲಿ 26 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆಯುವ ಗುರಿಯನ್ನು ಯೋಗಿ ಸರ್ಕಾರ ಹೊಂದಿದೆ.
ದೀಪಾವಳಿ ದೀಪೋತ್ಸವದ ಭವ್ಯ ಸಿದ್ಧತೆ
ಅಕ್ಟೋಬರ್ 19 ರಂದು ನಡೆಯುವ ದೀಪೋತ್ಸವದ ವೇಳೆ 2,100 ಭಕ್ತರಿಂದ ಮಹಾ ಆರತಿ ನಡೆಯಲಿದ್ದು, ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ಸೇರಿ 33,000 ಸ್ವಯಂಸೇವಕರು ಬೆಳಕಿನ ಹಬ್ಬವನ್ನು ಚಂದಗಾಣಿಸಲು ಕೈಜೋಡಿಸಿದ್ದಾರೆ.
ಒಟ್ಟು 56 ಘಾಟ್‌ಗಳಲ್ಲಿ ದೀಪಗಳನ್ನು ಹಚ್ಚುವ ಕಾರ್ಯ ನಡೆಯುತ್ತಿದ್ದು, ಪ್ರಮುಖವಾದ ರಾಮ್ ಕಿ ಪೈಡಿ ಘಾಟ್‌ನಲ್ಲಿ ಮಾತ್ರವೇ 16 ಲಕ್ಷ ದೀಪಗಳು ಬೆಳಗಲಿವೆ. ಚೌಧರಿ ಚರಣ್ ಸಿಂಗ್ ಘಾಟ್, ಭಜನ್ ಸಂಧ್ಯಾ ಘಾಟ್, ಲಕ್ಷ್ಮಣ ಕಿಲಾ ಸೇರಿದಂತೆ ಇತರೆ ಘಾಟ್‌ಗಳಲ್ಲೂ ಲಕ್ಷಾಂತರ ದೀಪಗಳ ಕಂಗೊಳ ಸೃಷ್ಟಿಯಾಗಲಿದೆ.

ಸ್ಥಳೀಯ ಕುಶಲಕರ್ಮಿಗಳಿಗೆ ಹೊಸ ಬೆಳಕು
ಆಧುನಿಕ ಪ್ಲಾಸ್ಟಿಕ್ ದೀಪಗಳಿಗೆ ಬದಲಾಗಿ ಮಣ್ಣಿನ ದೀಪಗಳನ್ನೇ ಬಳಸಲಾಗುತ್ತಿದೆ. ಸ್ಥಳೀಯ ಕುಂಬಾರ ಕುಟುಂಬಗಳಿಗೆ ಅವಕಾಶ ನೀಡುವ ದೃಷ್ಟಿಯಿಂದ ಸರ್ಕಾರವು ಅವರಿಂದಲೇ ದೀಪಗಳನ್ನು ಖರೀದಿಸಿದೆ. ಅಯೋಧ್ಯೆ ಮತ್ತು ಸುತ್ತಮುತ್ತಲಿನ ಹಳ್ಳಿಗಳ ಸುಮಾರು 40 ಕುಂಬಾರ ಕುಟುಂಬಗಳು 16 ಲಕ್ಷ ದೀಪಗಳನ್ನು ತಯಾರಿಸಿವೆ. ಇದರಿಂದ ಗ್ರಾಮೀಣ ಕೈಗಾರಿಕೆಗಳಿಗೆ ಬೆಂಬಲ ಸಿಕ್ಕಂತಾಗಿದೆ.
ದೀಪಗಳು ಉರಿಯಲು ಏನೆಲ್ಲ ಸಿದ್ಧತೆ?
ದೀಪೋತ್ಸವದ ಸಮಯದಲ್ಲಿ 55 ಲಕ್ಷ ಹತ್ತಿ ಬತ್ತಿಗಳು ಮತ್ತು 73,000 ಲೀಟರ್ ಎಣ್ಣೆ ಬಳಸಲಾಗುತ್ತಿದೆ. ದೀಪಗಳು ನಿರಂತರವಾಗಿ ಉರಿಯುವಂತೆ ಆಯೋಜಕರು ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ.
ತಂತ್ರಜ್ಞಾನ ಸಹಾಯದೊಂದಿಗೆ ದಾಖಲೆ ದೃಢೀಕರಣ
ಗಿನ್ನೆಸ್ ದಾಖಲೆಗಾಗಿ 150 ಸದಸ್ಯರ ತಂಡ, ಸಲಹೆಗಾರ ನಿಶ್ಚಲ್ ಬರೋಟ್ ಅವರ ನೇತೃತ್ವದಲ್ಲಿ ಕೆಲಸ ಮಾಡುತ್ತಿದೆ. ಡ್ರೋನ್‌ಗಳ ಸಹಾಯದಿಂದ ದೀಪಗಳ ಎಣಿಕೆ ನಡೆಯುತ್ತಿದ್ದು, ಹೈಟೆಕ್ ಸಾಫ್ಟ್‌ವೇರ್ ಮತ್ತು ಡಿಜಿಟಲ್ ಆಡಿಟಿಂಗ್ ವಿಧಾನಗಳು ಬಳಸಲಾಗುತ್ತಿವೆ.

ಡ್ರೋನ್ ಶೋ ಮತ್ತು ಲೇಸರ್ ಪ್ರದರ್ಶನ
ಈ ಬಾರಿ ದೀಪೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ 3ಡಿ ಹೋಲೊಗ್ರಾಫಿಕ್ ಸಂಗೀತ ಲೇಸರ್ ಪ್ರದರ್ಶನ ಮತ್ತು 1,100 ‘ಮೇಕ್ ಇನ್ ಇಂಡಿಯಾ’ ಡ್ರೋನ್‌ಗಳ ಪ್ರದರ್ಶನ ಉಲ್ಲೇಖನೀಯವಾಗಿದೆ. ದೀಪೋತ್ಸವ ಅಕ್ಟೋಬರ್ 20 ರವರೆಗೆ ಮುಂದುವರೆಯಲಿದ್ದು, ಅಯೋಧ್ಯೆ ಸಂಪೂರ್ಣವಾಗಿ ಬೆಳಕಿನ ಹಬ್ಬದ ಮೆರಗು ಹೊಂದುತ್ತಿದೆ.











