ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ಕಳ್ಳತನ ಪ್ರಕರಣದ ನಂತರ, ರಾಜ್ಯದ ಮತ್ತೊಂದು ಪ್ರಸಿದ್ಧ ಯಾತ್ರಾಕೇಂದ್ರವಾದ ಗುರುವಾಯೂರಿನಲ್ಲಿಯೂ ಇದೇ ರೀತಿಯ ಅಕ್ರಮಗಳು ನಡೆದಿರುವುದು ಬಹಿರಂಗವಾಗಿದೆ. ಇತ್ತೀಚೆಗೆ ಬಿಡುಗಡೆಯಾದ 2019ರ ಲೆಕ್ಕಪರಿಶೋಧನಾ ವರದಿ ದೇವಾಲಯದ ಆಸ್ತಿಪಾಸ್ತಿಗಳ ನಿರ್ವಹಣೆಯಲ್ಲಿನ ಗಂಭೀರ ನ್ಯೂನತೆಗಳನ್ನು ಬೆಳಕಿಗೆ ತಂದಿದೆ.
ವರದಿಯ ಪ್ರಕಾರ, ಚಿನ್ನ, ದಂತ ಸೇರಿದಂತೆ ಅನೇಕ ಬೆಲೆಬಾಳುವ ವಸ್ತುಗಳು “ಕಾಣೆಯಾಗಿದೆ” ಎಂದು ದಾಖಲಿಸಲಾಗಿದೆ. ಸರಿಯಾದ ಶಿಷ್ಟಾಚಾರ ಮತ್ತು ದಾಖಲೆ ಪ್ರಕ್ರಿಯೆ ಇಲ್ಲದೆ ದೇವಾಲಯದ ಆಸ್ತಿಗಳನ್ನು ನಿರ್ವಹಿಸಲಾಗಿದೆ ಎಂಬ ಗಂಭೀರ ಆರೋಪ ವರದಿಯಲ್ಲಿ ಉಲ್ಲೇಖವಾಗಿದೆ.
ಭಕ್ತರು ನೀಡುವ ಕಾಣಿಕೆಯ ಚೀಲ ಎಣಿಕೆಗೆ ಬಳಸಲಾಗುತ್ತಿದ್ದ ಮಂಚಡಿ ಅಥವಾ ಹವಳದ ಮರದ ಬೀಜಗಳು ಕಾಣೆಯಾದರೆ, ಭಕ್ತರು ಸಲ್ಲಿಸಿದ ಕೇಸರಿ ಹೂವುಗಳ ವಿವರ ದಾಖಲೆಗಳಲ್ಲಿ ಸೇರಿಸಿಲ್ಲ ಎಂದು ವರದಿ ತಿಳಿಸಿದೆ. ಇದರ ಜೊತೆಗೆ, ₹15 ಲಕ್ಷ ರೂ. ಮೌಲ್ಯದ 2,000 ಕೆ.ಜಿ ಸಾಂಪ್ರದಾಯಿಕ ಅಡುಗೆ ಪಾತ್ರೆಗಳು (ಉರುಳಿಗಳು) ಲೆಕ್ಕದಲ್ಲಿ ಕಾಣಿಸದೇ ಇರುವುದೂ ವರದಿಯಲ್ಲಿದೆ. ಈ ಪಾತ್ರೆಗಳನ್ನು ಕೇರಳದ ಪಾಲಕ್ಕಾಡ್ ಮೂಲದ ಭಕ್ತನೊಬ್ಬ ದಾನ ಮಾಡಿದ್ದನು ಎಂದು ತಿಳಿದುಬಂದಿದೆ.
ಇದಲ್ಲದೆ, ಪುನ್ನತ್ತೂರು ಆನೆಕೋಟೆಯಿಂದ ಸುಮಾರು 530 ಕೆ.ಜಿ ದಂತ ಕಾಣೆಯಾಗಿದೆ ಎಂಬ ಆರೋಪವೂ ವರದಿಯಲ್ಲಿ ದಾಖಲಾಗಿದೆ. ದಕ್ಷಿಣ ಕೇರಳದ 12 ದೇವಾಲಯಗಳನ್ನು ನಿರ್ವಹಿಸುವ ಗುರುವಾಯೂರು ದೇವಸ್ವಂ ಮಂಡಳಿ, ಎಲ್ಲ ನ್ಯೂನತೆಗಳನ್ನು ಸರಿಪಡಿಸಲಾಗಿದೆ ಮತ್ತು ಈ ವಿಷಯಗಳ ಕುರಿತು ವಿಸ್ತೃತ ಅಫಿಡವಿಟ್ ಕೇರಳ ಹೈಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣದ ತನಿಖೆ ವೇಗ
ಈ ಮಧ್ಯೆ, ಶಬರಿಮಲೆ ದೇವಾಲಯದ ಚಿನ್ನ ಕಳ್ಳತನ ಪ್ರಕರಣದ ತನಿಖೆ ಮುಂದುವರಿದಿದ್ದು, ವಿಶೇಷ ತನಿಖಾ ತಂಡ (ಎಸ್‌ಐಟಿ) ಶೀಘ್ರದಲ್ಲೇ ಕೇರಳ ಹೈಕೋರ್ಟ್‌ಗೆ ತನ್ನ ಮೊದಲ ಪ್ರಗತಿ ವರದಿ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ. ಜಯಕುಮಾರ್ ಅವರ ವಿಭಾಗೀಯ ಪೀಠವು ಇಂದು ಪ್ರಕರಣವನ್ನು ವಿಚಾರಣೆ ನಡೆಸಲಿದ್ದು, ಅದೇ ದಿನ ವರದಿ ಸಲ್ಲಿಸಲು ಎಸ್‌ಐಟಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ತನಿಖೆಯು 2019ರಲ್ಲಿ ದೇವಸ್ಥಾನದ ದ್ವಾರಪಾಲಕ ವಿಗ್ರಹಗಳು ಮತ್ತು ಶ್ರೀಕೋವಿಲ್ ಬಾಗಿಲು ಚೌಕಟ್ಟುಗಳಿಗೆ ಚಿನ್ನದ ಹೊದಿಕೆಯ ತಾಮ್ರದ ತಟ್ಟೆಗಳನ್ನು ಎಲೆಕ್ಟ್ರೋಪ್ಲೇಟಿಂಗ್ ಮಾಡಿದ ಪ್ರಕರಣದ ಸುತ್ತ ನಡೆಯುತ್ತಿದೆ. ಈ ಕೆಲಸಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮೂಲದ ಉನ್ನಿಕೃಷ್ಣನ್ ಪೊಟ್ಟಿ ಬಂಧಿತರಾಗಿದ್ದು, ಚಿನ್ನದ ತಟ್ಟೆಗಳನ್ನು ಎಲೆಕ್ಟ್ರೋಪ್ಲೇಟ್ ಮಾಡಲಾಗಿದ್ದ ಚೆನ್ನೈನ ಘಟಕದಲ್ಲೂ ತನಿಖೆ ನಡೆದಿದೆ.
ಹೈಕೋರ್ಟ್ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿ, ಎರಡು ವಾರಗಳಲ್ಲಿ ಪ್ರಗತಿ ವರದಿ ಮತ್ತು ಆರು ವಾರಗಳಲ್ಲಿ ಪೂರ್ಣ ತನಿಖೆ ಪೂರ್ಣಗೊಳಿಸಲು ಗಡುವು ವಿಧಿಸಿತ್ತು.
ಕೇರಳದ ಎರಡು ಪ್ರಮುಖ ದೇವಾಲಯಗಳಲ್ಲಿ ದಾಖಲಾಗಿರುವ ಈ ಆರೋಪಗಳು ಭಕ್ತರಲ್ಲಿ ಆತಂಕ ಹುಟ್ಟಿಸಿದ್ದು, ದೇವಾಲಯ ಆಸ್ತಿಗಳ ಸುರಕ್ಷತೆ ಮತ್ತು ಪಾರದರ್ಶಕತೆ ಬಗ್ಗೆ ಹೊಸ ಚರ್ಚೆ ಪ್ರಾರಂಭವಾಗುತ್ತಿದೆ.











