ಸಿಜೆಐ ಬಿಆರ್ ಗವಾಯಿ ಅವರ ನಂತರ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಲಿರುವ ನ್ಯಾ. ಸೂರ್ಯಕಾಂತ್
ನವದೆಹಲಿ: ಭಾರತದ ಸುಪ್ರೀಂ ಕೋರ್ಟ್‌ಗೆ ಶೀಘ್ರದಲ್ಲೇ ಹೊಸ ಮುಖ್ಯ ನ್ಯಾಯಮೂರ್ತಿ ದೊರೆಯಲಿದ್ದಾರೆ. ಪ್ರಸ್ತುತ ಸಿಜೆಐ ಬಿಆರ್ ಗವಾಯಿ ಅವರ ನಂತರ ಹಿರಿಯ ನ್ಯಾಯಾಧೀಶರಾದ ನ್ಯಾ. ಸೂರ್ಯಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆ ಮಾಡಲಾಗಿದೆ. ಸಿಜೆಐ ಗವಾಯಿ ಅವರು ಸೂರ್ಯಕಾಂತ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಅನುಮೋದನೆಗಾಗಿ ಔಪಚಾರಿಕವಾಗಿ ಕಳುಹಿಸಿದ್ದು, ಸರ್ಕಾರವು ಅಕ್ಟೋಬರ್ 23 ರಂದು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.
ಗವಾಯಿ ಅವರು ನವೆಂಬರ್ 23 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಅವರ ನಂತರ ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ನ್ಯಾಯಮೂರ್ತಿ ಸೂರ್ಯಕಾಂತ್ ಅವರ ವಿದ್ಯಾಭ್ಯಾಸ ಮತ್ತು ವೃತ್ತಿಜೀವನ
ಫೆಬ್ರವರಿ 10, 1962 ರಂದು ಹರಿಯಾಣದ ಹಿಸ್ಸಾರ್ನಲ್ಲಿ ಜನಿಸಿದ ಸೂರ್ಯಕಾಂತ್ ಅವರು 1981ರಲ್ಲಿ ಹಿಸಾರ್ ಸರಕಾರಿ ಸ್ನಾತಕೋತ್ತರ ಕಾಲೇಜ್‌ನಿಂದ ಪದವಿ ಪಡೆದರು. ಬಳಿಕ ರೋಹ್ತಕ್‌ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ 1984ರಲ್ಲಿ ಕಾನೂನಿನಲ್ಲಿ ಪದವಿ ಪಡೆದರು.
ಅದೇ ವರ್ಷ ಅವರು ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿಕೆಗೆ ಪ್ರವೇಶಿಸಿದರು ಮತ್ತು ಒಂದು ವರ್ಷದ ನಂತರ ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದರು. 2000ರಲ್ಲಿ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಆಗಿ ನೇಮಿಸಲ್ಪಟ್ಟರು.
2004ರ ಜನವರಿ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡ ಸೂರ್ಯಕಾಂತ್, 2018ರಲ್ಲಿ ಹಿಮಾಚಲಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ವಹಿಸಿದರು. ಬಳಿಕ 2019ರ ಮೇ 24ರಂದು ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡರು.
ಪ್ರಮುಖ ತೀರ್ಪುಗಳು ಮತ್ತು ಕೊಡುಗೆಗಳು
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಕಳೆದ ಎರಡು ದಶಕಗಳಲ್ಲಿ ವಾಕ್‌ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಭ್ರಷ್ಟಾಚಾರ ವಿರೋಧ, ಪರಿಸರ ಸಂರಕ್ಷಣೆ, ಲಿಂಗ ಸಮಾನತೆ ಮತ್ತು Article 370 ರದ್ದುಪಡಿಸುವಂತಹ ರಾಷ್ಟ್ರಪ್ರಮುಖ ವಿಚಾರಗಳಲ್ಲಿ ತಮ್ಮ ತೀರ್ಪುಗಳ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ.
ನ್ಯಾಯಾಂಗ ನೇಮಕಾತಿ ಕ್ರಮ
ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನ್ಯಾಯಾಧೀಶರ ನೇಮಕಾತಿಯನ್ನು ನಿಯಂತ್ರಿಸುವ ಪ್ರೋಟೋಕಾಲ್ ಪ್ರಕಾರ, ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಸಾಮಾನ್ಯವಾಗಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗುತ್ತದೆ. ನಿವೃತ್ತಿಯ ಮುನ್ನ ಒಂದೇ ತಿಂಗಳೊಳಗೆ ನಿರ್ಗಮಿತ ಸಿಜೆಐ ಅವರು ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುತ್ತಾರೆ.
ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾ. ಸೂರ್ಯಕಾಂತ್ ಅವರ ನೇಮಕ ಹೊಸ ಉತ್ಸಾಹ ಮತ್ತು ಅನುಭವದ ಸಂಯೋಜನೆಯನ್ನು ತರಲಿದೆ ಎಂದು ಕಾನೂನು ವಲಯದವರು ಅಭಿಪ್ರಾಯಪಟ್ಟಿದ್ದಾರೆ.











