ಅಬುಧಾಬಿ: ಜೀವನವನ್ನೇ ಬದಲಾಯಿಸುವಂತಹ ಅದೃಷ್ಟದ ಹೊಳಪನ್ನು ಕಂಡುಕೊಂಡಿದ್ದಾನೆ ಭಾರತ ಮೂಲದ ಯುವಕನೊಬ್ಬ! ಅಬುಧಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾಯಲ್ಲಿ 29 ವರ್ಷದ ಅನಿಲ್ ಕುಮಾರ್ ಬೊಲ್ಲಾ ಬರೋಬ್ಬರಿ 240 ಕೋಟಿ ರೂಪಾಯಿ ಮೌಲ್ಯದ ಲಾಟರಿ ಗೆದ್ದಿದ್ದಾರೆ.
ಅನಿಲ್ ಕುಮಾರ್ ಹೇಳುವಂತೆ, ಈ ಅದೃಷ್ಟದ ನಂಬರ್ ಎಂದರೆ ಅವರ ತಾಯಿಯ ಹುಟ್ಟುಹಬ್ಬದ ದಿನಾಂಕ! ಇದೇ ಸಂಖ್ಯೆಯು ಅವರಿಗೆ ಕೋಟ್ಯಾಧಿಪತಿ ಸ್ಥಾನ ತಂದುಕೊಟ್ಟಿದೆ.
ಯುಎಇ ಲಾಟರಿ ಸಂಸ್ಥೆ ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಅನಿಲ್ ಕುಮಾರ್ ಅವರ ವಿಜಯ ಕ್ಷಣದ ವಿಡಿಯೋ ಹಂಚಿಕೊಂಡಿದೆ. ಅದಕ್ಕೆ “ನಿರೀಕ್ಷೆಯಿಂದ ಆಚರಣೆವರೆಗೆ” ಎಂಬ ಶೀರ್ಷಿಕೆ ನೀಡಲಾಗಿದ್ದು, “ಈ ಒಂದು ದಿನ ಅನಿಲ್ ಜೀವನವನ್ನೇ ಬದಲಾಯಿಸಿತು” ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೋದಲ್ಲಿ ಅನಿಲ್ ಕುಮಾರ್ ತಮ್ಮ ಗೆಲುವಿನ ಸಂತೋಷವನ್ನು ವ್ಯಕ್ತಪಡಿಸಿದ್ದು, “ನಾನು ಯಾವುದೇ ಮಾಯಾಜಾಲ ಮಾಡಿಲ್ಲ. ನಾನು ಬರೀ ಸರಳ ಆಯ್ಕೆ ಮಾಡಿಕೊಂಡೆ. ಆ ನಂಬರ್ ನನ್ನ ತಾಯಿಯ ಹುಟ್ಟುಹಬ್ಬದ ಸಂಖ್ಯೆ. ಅದು ನನಗೆ ಅದೃಷ್ಟ ತಂದುಕೊಟ್ಟಿತು” ಎಂದು ಹೇಳಿದ್ದಾರೆ.
“ಲಾಟರಿ ಗೆದ್ದೆ ಎಂಬ ಸುದ್ದಿ ಕೇಳಿದಾಗ ನಾನು ಸೋಫಾದ ಮೇಲೆ ಕುಳಿತಿದ್ದೆ. ಮೊದಲಿಗೆ ನಂಬಲಾಗಲಿಲ್ಲ. ಆದರೆ ಬಳಿಕ ನನಗೆ ನಿಜವಾಗಿಯೂ ಲಾಟರಿ ಬಿದ್ದಿದೆ ಅನ್ನಿಸಿತು. ಈಗ ನನ್ನ ಜೀವನವೇ ಬದಲಾಯಿಸಿದೆ,” ಎಂದು ಅನಿಲ್ ಹೇಳಿದ್ದಾರೆ.
ಹಣದ ಬಳಕೆಯ ಬಗ್ಗೆ ಮಾತನಾಡುತ್ತಾ ಅವರು, “ಈ ಮೊತ್ತವನ್ನು ನಾನು ಜವಾಬ್ದಾರಿಯುತವಾಗಿ ಬಳಸುವೆ. ಹೂಡಿಕೆ ಮತ್ತು ದಾನ ಎರಡನ್ನೂ ಸರಿಯಾದ ರೀತಿಯಲ್ಲಿ ಮಾಡುತ್ತೇನೆ. ನನ್ನ ಕುಟುಂಬವನ್ನು ಯುಎಇಗೆ ಕರೆದುಕೊಂಡು ಬಂದು ಅವರ ಜೊತೆ ಉತ್ತಮ ಸಮಯ ಕಳೆಯಬೇಕೆಂದಿದೆ,” ಎಂದಿದ್ದಾರೆ.
ಅನಿಲ್ ಕುಮಾರ್ ತಮ್ಮ ಸಪ್ನಾ ಕಾರು ಖರೀದಿಸುವುದು, ಲಕ್ಷುರಿ ರೆಸಾರ್ಟ್ನಲ್ಲಿ ಸೆಲೆಬ್ರೇಟ್ ಮಾಡುವುದು, ಹಾಗೂ ಜನೋಪಯೋಗಿ ಕಾರ್ಯಗಳಿಗೆ ದಾನ ನೀಡುವುದು ಎಂಬ ಕನಸುಗಳನ್ನು ಹಂಚಿಕೊಂಡಿದ್ದಾರೆ.
ಅವರು ಮುಂದುವರೆದು, “ಲಾಟರಿ ಆಡುವವರು ಆಶೆಯನ್ನು ಕಳೆದುಕೊಳ್ಳಬಾರದು. ಪ್ರತಿಯೊಬ್ಬರಿಗೂ ಒಂದು ದಿನ ಅದೃಷ್ಟ ಖಂಡಿತ ಬಾಗಿಲು ತಟ್ಟುತ್ತದೆ. ಎಲ್ಲವೂ ಯಾವುದೋ ಕಾರಣಕ್ಕಾಗಿ ಆಗುತ್ತದೆ,” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಅಬುಧಾಬಿಯಲ್ಲಿ ನಡೆದ ಲಕ್ಕಿ ಡೇ ಡ್ರಾ ಲಾಟರಿಯಲ್ಲಿ ಭಾರತದ 29 ವರ್ಷದ ಅನಿಲ್ ಕುಮಾರ್ ಬೊಲ್ಲಾ ಬರೋಬ್ಬರಿ 240 ಕೋಟಿ ರೂಪಾಯಿ ಗೆದ್ದಿದ್ದಾರೆ. ತಾಯಿಯ ಹುಟ್ಟುಹಬ್ಬದ ನಂಬರ್ ಆಯ್ಕೆ ಮಾಡಿಕೊಂಡಿದ್ದು, ಅದೇ ಅವರ ಅದೃಷ್ಟದ ನಂಬರ್ ಆಗಿದೆ. ಲಾಟರಿ ಗೆದ್ದ ಸುದ್ದಿಯಿಂದ ಬೆಚ್ಚಿಬಿದ್ದ ಅನಿಲ್, ಈಗ ಹಣವನ್ನು ಜವಾಬ್ದಾರಿಯುತವಾಗಿ ಹೂಡಿಕೆ ಮಾಡಿ, ಕುಟುಂಬದ ಜೊತೆ ಕಳೆಯಲು ಹಾಗೂ ಕೆಲವು ಭಾಗವನ್ನು ದಾನ ಮಾಡಲು ಯೋಜಿಸಿದ್ದಾರೆ. ಜೀವನ ಬದಲಾಯಿಸಿದ ಈ ಗೆಲುವನ್ನು ಅವರು ತಮ್ಮ ತಾಯಿಗೆ ಸಮರ್ಪಿಸಿದ್ದಾರೆ.











