ಬೆಂಗಳೂರು: ಸಿರಿಗೆರೆಯ ತರಳಬಾಳು ಬೃಹನ್ಮಠದ ಆಸ್ತಿ ಮತ್ತು ಅಧಿಕಾರ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಹಿರೇಕೆರೂರಿನ ಎಸ್.ಎಸ್. ಪಾಟೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರಿದ್ದ ಏಕಸದಸ್ಯ ಪೀಠ, ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣದಲ್ಲಿ, ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್. ಜಯದೇವಪ್ಪ, ಮತ್ತು ತರಳಬಾಳು ವಿದ್ಯಾಸಂಸ್ಥೆ ಅಧ್ಯಕ್ಷ ಎಚ್. ಕರಿಬಸಪ್ಪ ಅವರನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.
ಪ್ರಕರಣದ ಹಿನ್ನೆಲೆ
ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸಿರಿಗೆರೆ ಮಠದ ಆಸ್ತಿ ಹಾಗೂ ಆಡಳಿತ ಕುರಿತು ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ. ದಾವಣಗೆರೆಯ ಭಕ್ತರ ಸಂಘಟನೆಯೊಂದು ಕಳೆದ ವರ್ಷ ಭಕ್ತ ಅಣಬೇರು ರಾಜಣ್ಣ ಅವರ ನೇತೃತ್ವದಲ್ಲಿ ಸಭೆ ನಡೆಸಿ, ಸ್ವಾಮೀಜಿಯವರ ಟ್ರಸ್ಟ್ ಡೀಡ್ ರದ್ದುಪಡಿಸಬೇಕು ಹಾಗೂ ಮಠದ ಮುಂದಿನ ಪೀಠಾಧಿಪತಿಯನ್ನು ಘೋಷಿಸಬೇಕು ಎಂದು ಆಗ್ರಹಿಸಿತ್ತು.
ಆ ಸಭೆಯಲ್ಲಿ, ಸ್ವಾಮೀಜಿಯವರು ಸುಮಾರು 30 ವರ್ಷಗಳ ಹಿಂದೆ ತೆರಿಗೆ ಉಳಿಸುವ ನೆಪದಲ್ಲಿ ಟ್ರಸ್ಟ್ ಡೀಡ್ ಮಾಡಿಕೊಂಡು, ಮಠದ ಸುಮಾರು ₹2,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿತ್ತು.
ಸ್ವಾಮೀಜಿಯವರ ಸ್ಪಷ್ಟನೆ
ಇದಕ್ಕೂ ಮೊದಲು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಈ ಆರೋಪಗಳನ್ನು ತಳ್ಳಿ ಹಾಕಿದ್ದರು. ಭರಮಸಾಗರ ಸಮೀಪದ ಕೋಳಹಾಳು ಗ್ರಾಮದಲ್ಲಿ ನಡೆದ ಬಸವೇಶ್ವರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಾನು ಎಂದಿಗೂ ಮಠದ ಹಣವನ್ನು ಪೂರ್ವಾಶ್ರಮದ ಸಂಬಂಧಿಗಳಿಗೆ ನೀಡಿಲ್ಲ. ಸುಳ್ಳು ಆರೋಪಗಳಿಂದ ದೂರವಿರಿ, ಸತ್ಯದ ಮೂಲವನ್ನು ಹುಡುಕಿ” ಎಂದು ಪ್ರತಿಕ್ರಿಯಿಸಿದ್ದರು.











