ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಶಿವಮೊಗ್ಗದಲ್ಲಿ ಅಪ್ರಾಪ್ತ ವಿದ್ಯಾರ್ಥಿ ಹತ್ಯೆ: ಪೊಲೀಸ್ ವೈಫಲ್ಯವೇ? ಆಕಸ್ಮಿಕ ಎಂದ ಎಸ್‌ಪಿ ನಿಖಿಲ್ ಹೇಳಿಕೆಗೆ ಆಕ್ರೋಶ

On: February 24, 2026 2:27 PM
Follow Us:

ಶಿವಮೊಗ್ಗ: ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದ 10ನೇ ತರಗತಿ ವಿದ್ಯಾರ್ಥಿ ಸ್ನೇಹಿತರ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿ ಪ್ರಾಣ ಕಳೆದುಕೊಂಡ ಘಟನೆ ಶಿವಮೊಗ್ಗದ ಸೂಳೆಬೈಲು ಬಡಾವಣೆಯ ಸರ್ಕಾರಿ ಶಾಲೆ ಆವರಣದ ಹೊರಗಡೆ ನಡೆದಿದ್ದು, ನಗರದಲ್ಲಿ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಮೃತ ವಿದ್ಯಾರ್ಥಿ ಸಂಕೇತ್ (15), ಊರಗಡೂರು ನಿವಾಸಿ ಕುಮಾರ್ ಅವರ ಪುತ್ರ. ಚಾಲಕ ವೃತ್ತಿ ಮಾಡಿಕೊಂಡಿರುವ ಕುಮಾರ್ ಅವರ ಕುಟುಂಬಕ್ಕೆ ಈ ದುರ್ಘಟನೆ ಮಿಂಚಿನಂತೆ ಬಡಿದಿದೆ. ಕಳೆದ ಎರಡು ತಿಂಗಳಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ನಡೆಯುತ್ತಿದ್ದ ವಿಶೇಷ ತರಗತಿ ಮುಗಿದ ಬಳಿಕ ರಾತ್ರಿ ಸುಮಾರು 8 ಗಂಟೆ ವೇಳೆಗೆ ಶಾಲೆಯಿಂದ ಹೊರಬಂದ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಹೋದ ಸಂಕೇತ್ ಎದೆ ಭಾಗಕ್ಕೆ ತೀವ್ರ ಏಟು ಬಿದ್ದ ಪರಿಣಾಮ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಘಟನೆಯ ನಂತರ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, “ಮಾತಿಗೆ ಮಾತು ಬೆಳೆದು ನಡೆದ ಆಕಸ್ಮಿಕ ಘಟನೆ” ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆದರೆ, ಎಸ್‌ಪಿ ಅವರ ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಬ್ಬ ಅಪ್ರಾಪ್ತ ವಿದ್ಯಾರ್ಥಿ ಸ್ನೇಹಿತರ ನಡುವಿನ ಗಲಾಟೆಯಲ್ಲಿ ಪ್ರಾಣ ಕಳೆದುಕೊಳ್ಳುವುದು ಕೇವಲ “ಆಕಸ್ಮಿಕ” ಎಂದು ಹೇಳಿ ಮುಚ್ಚಿಡಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಕೇವಲ ವೈಯಕ್ತಿಕ ಜಗಳವೋ, ಅಥವಾ ನಗರದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಗಳ ಪರಿಣಾಮವೋ ಎಂಬುದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಸ್ಥಳೀಯರ ಆರೋಪ ಪ್ರಕಾರ, ಶಿವಮೊಗ್ಗ ನಗರದಲ್ಲಿ ವಿಶೇಷವಾಗಿ ತುಂಗಾ ನಗರ, ದೊಡ್ಡಪೇಟೆ ಹಾಗೂ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತರ ಗುಂಪು ಗಲಾಟೆಗಳು, ಡ್ರಗ್ಸ್ ಮತ್ತು ಗಾಂಜಾ ಬಳಕೆ ಹೆಚ್ಚುತ್ತಿದೆ ಎನ್ನುವ ಆತಂಕವಿದೆ. ಯುವಕರಲ್ಲಿ ಹೆಚ್ಚುತ್ತಿರುವ ದುರ್ವ್ಯಸನ ಮತ್ತು ಹಿಂಸಾತ್ಮಕ ಮನೋಭಾವ ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳುತ್ತಿದೆಯೇ ಎಂಬ ಪ್ರಶ್ನೆ ಮತ್ತೆ ತಲೆದೋರಿದೆ.

ಶಾಲಾ ವಾತಾವರಣದ ಹೊರಗಡೆಲೇ ಇಂತಹ ಘಟನೆ ಸಂಭವಿಸಿರುವುದು ಪೋಷಕರಲ್ಲಿ ಭಯ ಹುಟ್ಟಿಸಿದೆ. ವಿಶೇಷ ತರಗತಿ ನಡೆಯುತ್ತಿದ್ದ ಸಂದರ್ಭದಲ್ಲಿ ಸಮರ್ಪಕ ಭದ್ರತೆ ಒದಗಿಸಲಾಗಿತ್ತೇ? ಶಾಲಾ ಸುತ್ತಮುತ್ತ ನಿಯಮಿತ ಪೆಟ್ರೋಲಿಂಗ್ ನಡೆದಿತ್ತೇ? ಇಂತಹ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ದೊರಕಬೇಕಿದೆ.

ಸ್ಥಳೀಯ ಮಾಹಿತಿ ಪ್ರಕಾರ, ಕ್ರಿಕೆಟ್ ಆಟದ ವಿಚಾರದಲ್ಲಿ ಗಲಾಟೆ ಆರಂಭಗೊಂಡಿದೆ ಎನ್ನಲಾಗಿದೆ. ಕೆಲವರು ಇದಕ್ಕೆ ಅನ್ಯಕೋಮಿನ ಬಾಲಕರ ಭಾಗವಹಿಸುವಿಕೆ ಇದೆ ಎಂಬ ಮಾತನ್ನೂ ಹರಡುತ್ತಿದ್ದಾರೆ. ಆದರೆ, ಇಂತಹ ಸಂವೇದನಶೀಲ ಸಂದರ್ಭದಲ್ಲಿ ಜವಾಬ್ದಾರಿಯುತ ತನಿಖೆ ನಡೆಸಿ ವಾಸ್ತವಾಂಶ ಹೊರತರುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ. ಘಟನೆಗೆ ಅನಗತ್ಯವಾಗಿ ರಾಜಕೀಯ ಅಥವಾ ಸಾಮಾಜಿಕ ಬಣ್ಣ ಹಚ್ಚದಂತೆ ತಡೆಯುವುದು ಅತ್ಯಗತ್ಯ.

ಒಬ್ಬರೇ ಮಗನಾಗಿದ್ದ ಸಂಕೇತ್‌ನ ಮೃತದೇಹವನ್ನು ನೋಡಿದ ತಾಯಿ-ತಂದೆಯರ ಆಕ್ರಂದನ ಮನಕಲಕುವಂತಿತ್ತು. “ಜಗಳ ಬಿಡಿಸಲು ಹೋದ ನನ್ನ ಮಗನಿಗೆ ಈ ಶಿಕ್ಷೆಯೇ?” ಎಂದು ಕಣ್ಣೀರಿಟ್ಟ ತಾಯಿ, ಮಗನ ಕನಸುಗಳ ಬಗ್ಗೆ ಹೇಳುತ್ತಲೇ ಕುಸಿದುಬಿದ್ದರು. ದಿನಗೂಲಿ ಮಾಡಿ ಮಗನನ್ನು ಓದಿಸಿ ದೊಡ್ಡವನನ್ನಾಗಿಸಬೇಕೆಂಬ ಕನಸು ಕಂಡಿದ್ದ ತಂದೆಯ ಜೀವನವೇ ಶೂನ್ಯವಾಗಿದೆ.

ಒಬ್ಬ ವಿದ್ಯಾರ್ಥಿಯ ಸಾವಿನಿಂದ ಕೇವಲ ಒಂದು ಕುಟುಂಬವಷ್ಟೇ ಅಲ್ಲ, ಒಂದು ಸಮುದಾಯವೇ ಬೆಚ್ಚಿಬಿದ್ದಿದೆ. ಶಾಲೆಗೆ ಸುರಕ್ಷಿತವಾಗಿ ಹೋಗಿ ಬರುವ ಭರವಸೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂಬ ಆತಂಕ ಪೋಷಕರನ್ನು ಕಾಡುತ್ತಿದೆ.

ಈ ಘಟನೆ ಕೇವಲ ಒಂದು ಪ್ರಕರಣವಾಗಿ ಉಳಿಯಬಾರದು. ನಗರದಲ್ಲಿ ಅಪ್ರಾಪ್ತರ ನಡುವಿನ ಹಿಂಸಾತ್ಮಕ ಚಟುವಟಿಕೆಗಳು, ಡ್ರಗ್ಸ್ ಮತ್ತು ಗಾಂಜಾ ಜಾಲದ ಮೇಲೆ ವಿಶೇಷ ದಾಳಿ ನಡೆಸುವುದು, ಶಾಲೆಗಳ ಸುತ್ತಮುತ್ತ ಕಠಿಣ ನಿಗಾ ವಹಿಸುವುದು, ಪೋಷಕರ ಜಾಗೃತಿ ಕಾರ್ಯಕ್ರಮಗಳು ಮತ್ತು ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸುವುದು ಅತ್ಯಗತ್ಯವಾಗಿದೆ.

ಶಿವಮೊಗ್ಗ ನಗರದ ತುಂಗಾನಗರ, ದೊಡ್ಡಪೇಟೆ ಹಾಗೂ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುವರಿ ಪೆಟ್ರೋಲಿಂಗ್, ಸಿಸಿಟಿವಿ ನಿಗಾ ಮತ್ತು ವಿಶೇಷ ಕಾರ್ಯಾಚರಣೆಗಳನ್ನು ತಕ್ಷಣ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಒಬ್ಬ ಅಪ್ರಾಪ್ತ ಬಾಲಕನ ಸಾವನ್ನು “ಆಕಸ್ಮಿಕ” ಎಂದು ವರ್ಗೀಕರಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಮೂಲ ಕಾರಣಗಳನ್ನು ಪತ್ತೆಹಚ್ಚಿ, ಇಂತಹ ಘಟನೆಗಳು ಮರುಕಳಿಸದಂತೆ ದೃಢವಾದ ಕ್ರಮ ಕೈಗೊಳ್ಳುವುದು ಮಾತ್ರವೇ ಸಂಕೇತ್ ಆತ್ಮಕ್ಕೆ ನಿಜವಾದ ನ್ಯಾಯವಾಗಲಿದೆ.

ಊರುಗಡೂರಿನಲ್ಲಿ ನಡೆದ ಈ ದಾರುಣ ಘಟನೆಯ ಕುರಿತು ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ತರಗತಿ ಮುಗಿಸಿಕೊಂಡು ಮನೆಗೆ ಸುರಕ್ಷಿತವಾಗಿ ತಲುಪಬೇಕಿದ್ದ ವಿದ್ಯಾರ್ಥಿಯೊಬ್ಬನು ಶಾಲಾ ಆವರಣದ ಹೊರಗೆ ಗುಂಪು ದಾಳಿ ನಡೆಸಿ ಕೊಲೆಯಾಗಿರುವುದು ಕೇವಲ ಕಾನೂನು ಸುವ್ಯವಸ್ಥೆಯ ವೈಫಲ್ಯವಲ್ಲ, ಆಡಳಿತದ ನಿರ್ಲಕ್ಷ್ಯದ ಸ್ಪಷ್ಟ ಉದಾಹರಣೆ ಎಂದು ಅವರು ಕಿಡಿಕಾರಿದ್ದಾರೆ. “ಬಂಧನ ಮಾಡಿದರೆ ಹೋದ ಪ್ರಾಣ ವಾಪಸ್ ಬರುತ್ತದೆಯೇ? ಪ್ರಾಣ ಹೋಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವ ಹೊಣೆಗಾರಿಕೆ ಯಾರದು?” ಎಂದು ಪ್ರಶ್ನಿಸಿರುವ ಅವರು, ಸೂಕ್ಷ್ಮ ಪ್ರದೇಶಗಳಾದ ಸೊಳೆಬೈಲು ಮತ್ತು ಊರುಗಡೂರಿನಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ಇದೆ ಎಂಬುದನ್ನು ಎಸ್‌ಪಿ ಗಮನಕ್ಕೆ ತಂದಿದ್ದರೂ ಸಮರ್ಪಕ ಭದ್ರತಾ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ಸರ್ಕಾರದ ಕೆಲವು ನಿರ್ಧಾರಗಳು ಹಾಗೂ ಪೊಲೀಸ್ ಇಲಾಖೆಯ ಸಡಿಲ ನಿಲುವು ಇಂತಹ ದುಷ್ಕೃತ್ಯಗಳಿಗೆ ಉತ್ತೇಜನ ನೀಡುತ್ತಿವೆ ಎಂದು ಅವರು ಖಂಡಿಸಿದ್ದು, ಘಟನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಸರ್ಕಾರವೇ ಹೊತ್ತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Read more

Leave a Comment