ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಾರತ–ರಷ್ಯಾ ಬಾಂಧವ್ಯಕ್ಕೆ ಹೊಸ ಆಯಾಮ : 2030ರ ಆರ್ಥಿಕ ಸಹಕಾರ ಯೋಜನೆಗೆ ಒಪ್ಪಂದ

On: December 5, 2025 10:30 PM
Follow Us:

ನವದೆಹಲಿ: ವಿಶ್ವ ಮಟ್ಟದ ರಾಜತಾಂತ್ರಿಕ ಬದಲಾವಣೆಗಳ ನಡುವೆ, ಭಾರತ ಮತ್ತು ರಷ್ಯಾ ದೀರ್ಘಕಾಲದ ವಿಶ್ವಾಸ, ತಂತ್ರಜ್ಞಾನ ಮತ್ತು ಆರ್ಥಿಕ ಸಹಕಾರದ ಆಧಾರದ ಮೇಲೆ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ಶೃಂಗಸಭೆಯಲ್ಲಿ, 2030ರೊಳಗೆ ಸಮಗ್ರ ಆರ್ಥಿಕ ಸಹಕಾರ ಯೋಜನೆಗೆ ಅಂತಿಮ ಒಪ್ಪಂದ ಕೈಗೊಳ್ಳಲಾಗಿದೆ.

ಈ ಯೋಜನೆಯಡಿಯಲ್ಲಿ ವ್ಯಾಪಾರ, ಕೈಗಾರಿಕೆ, ಇಂಧನ, ವಿಜ್ಞಾನ–ತಂತ್ರಜ್ಞಾನ, ಆಹಾರ ಗುಣಮಟ್ಟ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ವಿಸ್ತೃತ ಸಹಕಾರಕ್ಕೆ ಎರಡು ರಾಷ್ಟ್ರಗಳು ಒಮ್ಮತ ವ್ಯಕ್ತಪಡಿಸಿವೆ. ಜಾಗತಿಕ ಸ್ಪರ್ಧೆಯಲ್ಲಿ, ವಿಶೇಷವಾಗಿ ಅಮೆರಿಕದ ಆರ್ಥಿಕ ಪ್ರಭಾವಕ್ಕೆ ಪರೋಕ್ಷವಾಗಿ ಟಕ್ಕರ್ ನೀಡುವ ರೀತಿಯ ತಂತ್ರ ರೂಪಿಸಲಾಗಿದೆ ಎನ್ನಲಾಗಿದೆ.

2030ಕ್ಕೆ 100 ಬಿಲಿಯನ್ ಡಾಲರ್ ವ್ಯಾಪಾರ ಗುರಿ

ಶೃಂಗಸಭೆಯ ಬಳಿಕ ಬಿಡುಗಡೆಗೊಳಿಸಿದ ಜಂಟಿ ಪ್ರಕಟಣೆಯಲ್ಲಿ, ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 70 ಬಿಲಿಯನ್ ಡಾಲರ್‌ನಿಂದ 2030ರೊಳಗೆ 100 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿಸುವ ಗುರಿ ಘೋಷಿಸಲಾಗಿದೆ. ಭಾರತ ರಷ್ಯಾದಿಂದ ತೈಲ ಆಮದು ಕಡಿಮೆ ಮಾಡದಿರುವ ವಿಚಾರವನ್ನು ಪ್ರಶಂಸಿಸಿದ ಪುಟಿನ್, “ಭಾರತಕ್ಕೆ ಅಗತ್ಯವಿರುವ ಇಂಧನ ಪೂರೈಕೆಯನ್ನು ನಿರಂತರವಾಗಿ ಮುಂದುವರಿಸುತ್ತೇವೆ” ಎಂದು ಭರವಸೆ ನೀಡಿದರು.

ಉಕ್ರೇನ್ ಸಂಘರ್ಷ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ಶಾಂತಿಯುತ ಮತ್ತು ಶಾಶ್ವತ ಪರಿಹಾರಕ್ಕಾಗಿ ಭಾರತ ತನ್ನ ಪ್ರಯತ್ನವನ್ನು ಮುಂದುವರಿಸುತ್ತದೆ” ಎಂದು ಹೇಳಿದರು.

ಕೈಗಾರಿಕೆ: ರಷ್ಯಾದಲ್ಲೇ ಭಾರತೀಯ ಯೂರಿಯಾ ಘಟಕ

ಕೈಗಾರಿಕಾ ಸಹಕಾರದ ಭಾಗವಾಗಿ ಯುರಾಲ್ಕೆಮ್ ಸಂಸ್ಥೆ ಮತ್ತು ಭಾರತೀಯ ಸಂಸ್ಥೆಗಳೊಂದಿಗೆ ರಷ್ಯಾದಲ್ಲೇ ಯೂರಿಯಾ ಕಾರ್ಖಾನೆ ಸ್ಥಾಪನೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಭವಿಷ್ಯದಲ್ಲಿ ಇದೇ ತಂತ್ರಜ್ಞಾನವನ್ನು ಭಾರತದಲ್ಲೂ ಅಳವಡಿಸಲು ಅವಕಾಶ ಕಲ್ಪಿಸಲಾಗುವುದು.

ಆಹಾರ ಗುಣಮಟ್ಟ ಸುಧಾರಣೆ: ಮಹತ್ವದ ಒಪ್ಪಂದ

ಎಫ್‌ಎಸ್‌ಎಸ್‌ಎಐ ಮತ್ತು ರಷ್ಯಾದ ಗ್ರಾಹಕ ರಕ್ಷಣೆ ಸಂಸ್ಥೆಗಳು ಸಹಕರಿಸುವ ನಿರ್ಧಾರ ಕೈಗೊಂಡಿದ್ದು, ಧಾನ್ಯ, ಹಣ್ಣು, ತರಕಾರಿ ಮತ್ತು ಪ್ಯಾಕೇಜ್ಡ್ ಆಹಾರಗಳ ಗುಣಮಟ್ಟ ನಿಯಂತ್ರಣ ಹಾಗೂ ಪರೀಕ್ಷಾ ವಿಧಾನಗಳಲ್ಲಿ ಮಾದರಿ ಹಂಚಿಕೊಳ್ಳಲಾಗುವುದು.

ವೈದ್ಯಕೀಯ ಮತ್ತು ಸಂಶೋಧನೆ–ಆರೋಗ್ಯ ಕ್ಷೇತ್ರದಲ್ಲಿ ಹೊಸ ಜಂಟಿ ಹೆಜ್ಜೆ

ಕ್ಯಾನ್ಸರ್, ಹೃದ್ರೋಗ, ಲಸಿಕೆ, ಬಯೋ–ಮೆಡಿಸಿನ್ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನೆಯಲ್ಲಿ ಸಂಯುಕ್ತ ಸಂಶೋಧನೆ ಹಾಗೂ ವೈದ್ಯಕೀಯ ತರಬೇತಿಗೆ ಭಾರತ–ರಷ್ಯಾ ಒಪ್ಪಂದ ಮಾಡಿಕೊಂಡಿವೆ.

ಡಾಲರ್ ಬದಲಿಗೆ “ರೂ-ರೂ” ವ್ಯವಹಾರಕ್ಕೆ ಒತ್ತು

ದ್ವಿಪಕ್ಷೀಯ ವಾಣಿಜ್ಯದಲ್ಲಿ ಅಮೆರಿಕನ್ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಎರಡು ದೇಶಗಳು ರೂಪಾಯಿ–ರೂಬಲ್ ವ್ಯವಹಾರಕ್ಕೆ ಒತ್ತು ನೀಡುವುದಾಗಿ ತಿಳಿಸಿವೆ. ಇದರಿಂದ ಜಾಗತಿಕ ಕರೆನ್ಸಿ ಬದಲಾವಣೆ ಒತ್ತಡಗಳ ನಡುವೆಯೂ ಸ್ವತಂತ್ರ ವಾಣಿಜ್ಯ ಸಾಧ್ಯವಾಗಲಿದೆ.

ಭಯೋತ್ಪಾದನೆ ವಿರುದ್ಧ ಏಕವ್ಯವಸ್ಥೆ

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಸಹಕಾರವನ್ನು ಇನ್ನಷ್ಟು ಬಲಪಡಿಸಲು ಭಾರತ ಮತ್ತು ರಷ್ಯಾ ಒಪ್ಪಂದ ಮಾಡಿಕೊಂಡಿದ್ದು, ಈ ನಿರ್ಧಾರ ಪಾಕಿಸ್ತಾನಕ್ಕೆ ಆತಂಕಕಾರಿ ಸಂದೇಶವೆಂದು ತಜ್ಞರು ಹೇಳಿದ್ದಾರೆ.

K.M.Sathish Gowda

Join WhatsApp

Join Now

Facebook

Join Now

Leave a Comment