ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ಪುಟಿನ್; ಪ್ರಧಾನಿ ಮೋದಿಯಿಂದ ಆತ್ಮೀಯ ಸ್ವಾಗತ

On: December 4, 2025 9:39 PM
Follow Us:

ನವದೆಹಲಿ, ಡಿ. 4: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ 2 ದಿನಗಳ ಭಾರತ ಪ್ರವಾಸಕ್ಕಾಗಿ ಗುರುವಾರ ಸಂಜೆ ನವದೆಹಲಿಗೆ ಆಗಮಿಸಿದರು. ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಹಾಜರಾಗಿ, ಶೇಕ್‌ಹ್ಯಾಂಡ್ ಮಾಡಿ, ಆತ್ಮೀಯವಾಗಿ ಅಪ್ಪಿಕೊಂಡು ಪುಟಿನ್ ಅವರಿಗೆ ಭರ್ಜರಿ ಸ್ವಾಗತ ನೀಡಿದರು. ಉಕ್ರೇನ್‌ ಯುದ್ಧ ಆರಂಭವಾದ ನಂತರ ಪುಟಿನ್ ಅವರ ಇದೇ ಮೊದಲ ಭಾರತ ಭೇಟಿಯಾಗಿದೆ.

ಪುಟಿನ್‌ರನ್ನು ಬರಮಾಡಿಕೊಳ್ಳಲು ಶಿಷ್ಟಾಚಾರದ ಬದಿಗೊತ್ತಿ ಸ್ನೇಹಕ್ಕೆ ಆದ್ಯತೆ ನೀಡಿ, ಮೋದಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಆಗಮನದ ನಂತರ ಇಬ್ಬರೂ ಒಂದೇ ಕಾರಿನಲ್ಲಿ ಒಟ್ಟಿಗೆ ಪ್ರಯಾಣ ಬೆಳೆಸಿದ್ದು, ಇಬ್ಬರ ನಡುವೆ ವ್ಯಕ್ತಿಗತ ಸ್ನೇಹದ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತಿರುವ ಸೂಚನೆ ನೀಡಿತು.

ಮೌರ್ಯ ಹೋಟೆಲ್‌ನಲ್ಲಿ ರಾಷ್ಟ್ರಪತಿ ಮಟ್ಟದ ಆತಿಥ್ಯ

ಪುಟಿನ್ ಅವರ ವಾಸ್ತವ್ಯಕ್ಕಾಗಿ ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ‘ಚಂದ್ರಗುಪ್ತ ಸೂಟ್’ನಲ್ಲಿ ಅವರು ವಾಸ್ತವ್ಯ ಮಾಡಲಿದ್ದು, ರಾತ್ರಿಯ ಭೋಜನವನ್ನು ಹೋಟೆಲ್‌ನ ಪ್ರಸಿದ್ದ “ದಮ್ ಪುಖ್ತ್” ರೆಸ್ಟೋರೆಂಟ್‌ನಲ್ಲಿ ಆಯೋಜಿಸಲಾಗಿದೆ. ಅವರ ಸುತ್ತಮುತ್ತ 5 ಹಂತದ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ರಾಷ್ಟ್ರ ಭದ್ರತಾ ಪಡೆಯ ಕಮಾಂಡೊಗಳು, ಸ್ನೈಪರ್ ಪಡೆ, ಡ್ರೋನ್ ಹಾಗೂ ಎಐ ಆಧಾರಿತ ಪರಿಶೀಲನಾ ತಂತ್ರಜ್ಞಾನ ನಿಯೋಜಿಸಲಾಗಿದೆ.

ಶುಕ್ರವಾರ ಭಾರತ–ರಷ್ಯಾ ವಾರ್ಷಿಕ ಶೃಂಗಸಭೆ

ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಪುಟಿನ್ ಅವರಿಗೆ ಅಧಿಕೃತ ಭವ್ಯ ಸ್ವಾಗತ ನೀಡಲಾಗುತ್ತದೆ. ನಂತರ ಅವರು ರಾಜ್‌ಘಾಟ್‌ಗೆ ಹೋಗಿ ಗಾಂಧಿ ಸಮಾಧಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ. ಹೈದ್ರಾಬಾದ್ ಹೌಸ್ ಮತ್ತು ಭಾರತ ಮಂಟಪದಲ್ಲಿ ಪ್ರಧಾನಮಂತ್ರಿ ಮೋದಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದ್ದು, ಬಳಿಕ ರಾಷ್ಟ್ರಪತಿ ಭವನದಲ್ಲಿ ವಿಶೇಷ ಭೋಜನ ಕೂಟ ಏರ್ಪಡಿಸಲಾಗಿದೆ.

ಈ ವೇಳೆ ರಕ್ಷಣಾ, ಇಂಧನ, ಪರಮಾಣು ಸಹಕಾರ, ವ್ಯಾಪಾರ ಹಾಗೂ ಆರ್ಥಿಕ ಸಹಭಾಗಿತ್ವ ಸೇರಿದಂತೆ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆ ಇದೆ. ವಿಶೇಷವಾಗಿ ಸಣ್ಣ ಪರಮಾಣು ಘಟಕಗಳ ನಿರ್ಮಾಣ, ಎಸ್-400 ಕ್ಷಿಪಣಿ ವ್ಯವಸ್ಥೆ, ನವೀಕರಿಸಿದ ಯುದ್ಧ ವಿಮಾನಗಳ ಖರೀದಿ, ಸುಂಕ–ಸುಂಕರಹಿತ ವ್ಯಾಪಾರ ಹಾಗೂ ಮಾನವ ಸಂಪನ್ಮೂಲ ವಿನಿಮಯದ ಬಗ್ಗೆ ಚರ್ಚೆಗಳು ನಡೆಯಲಿವೆ.

ರಷ್ಯಾದಿಂದ ಭಾರತ ಗರಿಷ್ಠ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವ ಹಿನ್ನೆಲೆಯಲ್ಲಿ, ಇತ್ತೀಚೆಗೆ ಅಮೆರಿಕ ಭಾರತೀಯ ಉತ್ಪನ್ನಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದ್ದರೂ, ಭಾರತ–ರಷ್ಯಾ ಸಂಬಂಧ ಗಟ್ಟಿಯಾಗಿರುವುದು ಜಗತ್ತಿನ ಗಮನ ಸೆಳೆದಿದೆ. ಈ ಭೇಟಿಯನ್ನು ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿಶ್ಲೇಷಕರು ಹೇಳಿದ್ದಾರೆ.

ಉಕ್ರೇನ್ ಯುದ್ಧ, ಅಮೆರಿಕದ ನಿರ್ಬಂಧ, ಜಾಗತಿಕ ಆರ್ಥಿಕ ಹಂಗಾಮಿ ಪರಿಸ್ಥಿತಿಯ ನಡುವೆ ಪುಟಿನ್–ಮೋದಿ ಮಾತುಕತೆಗಳು ನಡೆಯುತ್ತಿರುವುದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

ಒಟ್ಟಿನಲ್ಲಿ, ವ್ಲಾಡಿಮಿರ್ ಪುಟಿನ್ ಅವರ ಭಾರತ ಪ್ರವಾಸವು, ಎರಡೂ ದೇಶಗಳ ರಾಜತಾಂತ್ರಿಕ, ಆರ್ಥಿಕ ಹಾಗೂ ರಕ್ಷಣಾ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರೀಕ್ಷೆ ಮೂಡಿಸಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment