ನವದೆಹಲಿ: ಭಾರತದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಡಿಜಿಟಲ್ ಜನಗಣತಿ ನಡೆಸಲು ಕೇಂದ್ರ ಸಚಿವ ಸಂಪುಟವು 11,718 ಕೋಟಿ ರೂ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಗೆ ಅನುಮೋದನೆ ನೀಡಿದೆ. ವಿಶ್ವದ ಅತಿದೊಡ್ಡ ಜನಗಣತೆಯಾಗಲಿರುವ 2027ರ ಎಣಿಕೆ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಮೊದಲ ಹಂತವನ್ನು 2026ರ ಏಪ್ರಿಲ್ರಿಂದ ಸೆಪ್ಟೆಂಬರ್ವರೆಗೆ ನಡೆಸಲಾಗುತ್ತಿದ್ದು, ಈ ಅವಧಿಯಲ್ಲಿ ಮನೆ ಪಟ್ಟಿ ಮತ್ತು ವಸತಿ ಗಣತಿ ಪೂರ್ಣಗೊಳ್ಳಲಿದೆ. ಲಡಾಖ್, ಜಮ್ಮು–ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಸೆಪ್ಟೆಂಬರ್ 2026ರೊಳಗೆ ಈ ಹಂತವನ್ನು ಮುಕ್ತಾಯಗೊಳಿಸಲಾಗುವುದು. ಎರಡನೇ ಹಂತವನ್ನು 2027ರ ಫೆಬ್ರವರಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಜನಸಂಖ್ಯೆಯ ಸಂಪೂರ್ಣ ಗಣತಿಯನ್ನು ನಡೆಸಲಾಗುತ್ತದೆ.
ಸುಮಾರು 30 ಲಕ್ಷ ಕ್ಷೇತ್ರ ಕಾರ್ಯಕರ್ತರು ಈ ಜನಗಣತಿ ಕಾರ್ಯದಲ್ಲಿ ತೊಡಗಲಿದ್ದು, 1.5 ಕೋಟಿಗೂ ಹೆಚ್ಚು ಮಾನವ ದಿನದ ಉದ್ಯೋಗಗಳ ಸೃಷ್ಟಿ ಆಗಲಿದೆ ಎಂದು ಸಚಿವರು ಹೇಳಿದ್ದಾರೆ. 2027ರ ಜನಗಣತಿ ದೇಶದ ಮೊದಲ ಡಿಜಿಟಲ್ ಜನಗಣತಿಯಾಗಿದ್ದು, ‘ಜನಗಣತಿ ನಿರ್ವಹಣೆ ಮತ್ತು ಮಾನಿಟರಿಂಗ್ ಸಿಸ್ಟಮ್’ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜನಗಣತಿ ಡೇಟಾ ಹೆಚ್ಚು ಶುದ್ಧ, ಸುಲಭ ಮತ್ತು ಬಳಕೆದಾರ ಸ್ನೇಹಿಯಾಗಲಿದ್ದು, ಸಾರ್ವಜನಿಕರಿಗೆ ಸ್ವಯಂ-ಎಣಿಕೆ ಸೌಲಭ್ಯವನ್ನೂ ಒದಗಿಸಲಾಗುತ್ತದೆ.
ಜಾತಿ ಗಣತಿಯ ಕುರಿತು 2025ರ ಏಪ್ರಿಲ್ 30ರಂದು ನಡೆದ ರಾಜಕೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಮಹತ್ವದ ನಿರ್ಧಾರ ಕೈಗೊಂಡಿತ್ತು. ಅದರಂತೆ 2027ರ ಜನಗಣತಿಯ ಎರಡನೇ ಹಂತದಲ್ಲಿ ಜಾತಿ ಆಧಾರಿತ ಡಾಟಾವನ್ನು ಡಿಜಿಟಲ್ ಮೂಲಕ ಸಂಗ್ರಹಿಸಲಾಗುವುದು. ಭಾರತದ ಸಾಮಾಜಿಕ ಮತ್ತು ಜನಸಂಖ್ಯಾ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಡೇಟಾ ಸಂಗ್ರಹಣೆ ಅಗತ್ಯವಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.











