ನವದೆಹಲಿ, ಡಿಸೆಂಬರ್ 3: ನಕಲಿ ಸುದ್ದಿ, ತಪ್ಪು ಮಾಹಿತಿ ಮತ್ತು ಸಾಮಾಜಿಕ ಮಾಧ್ಯಮದ ದುರುಪಯೋಗವು ದೇಶದ ಪ್ರಜಾಪ್ರಭುತ್ವದ ಮೂಲಾಧಾರಗಳಿಗೆ ದೊಡ್ಡ ಅಪಾಯವನ್ನುಂಟುಮಾಡುತ್ತಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಗಂಭೀರ ಕಳವಳ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಪ್ರತಿಕ್ರಿಯಿಸಿದ ಅವರು, AI ಜನರೇಟೆಡ್ ಡೀಪ್ಫೇಕ್ಗಳನ್ನು ಗುರುತಿಸಿ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಹೊಸ ಕರಡು ನಿಯಮಗಳನ್ನು ಪ್ರಕಟಿಸಿದೆ ಎಂದು ತಿಳಿಸಿದರು. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ವಾಸ್ತವಕ್ಕೂ ಸಂಬಂಧಿಸದ ಸುಳ್ಳು ವಿಷಯಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಇದನ್ನು ತಡೆಯಲು ಸಾಮಾಜಿಕ ಮಾಧ್ಯಮ ವೇದಿಕೆಗಳೇ ಹೆಚ್ಚಿನ ಹೊಣೆಗಾರಿಕೆ ವಹಿಸಬೇಕಿದೆ ಎಂದು ಸಚಿವರು ಒತ್ತಾಯಿಸಿದರು.
ಯಾವುದೇ ಟಿವಿ ಚಾನೆಲ್ ಅಥವಾ ಪತ್ರಿಕೆಯ ವಿರುದ್ಧ ಬರುವ ದೂರುಗಳನ್ನು ಭಾರತೀಯ ಪತ್ರಿಕಾ ಮಂಡಳಿ ಮತ್ತು ಸರ್ಕಾರ ಸಮಗ್ರವಾಗಿ ಪರಿಶೀಲಿಸುತ್ತಿದ್ದು, ನಂಬಿಕೆಯನ್ನು ಕಾಪಾಡಿಕೊಳ್ಳಲು ಕೇಂದ್ರ–ರಾಜ್ಯ ಸರ್ಕಾರಗಳು ಹಾಗೂ ನಾಗರಿಕ ಸಮಾಜ ಸಮನ್ವಯವಾಗಿ ಕೆಲಸ ಮಾಡಬೇಕಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಅಭಿಯಾನವು ದೇಶದಲ್ಲಿ ಹೊಸ ತಂತ್ರಜ್ಞಾನ ಕ್ರಾಂತಿಯನ್ನು ತಂದಿದ್ದು, ಅದರ ಪಾಸಿಟಿವ್ ಪರಿಣಾಮಗಳನ್ನು ಭಾರತ ಕಂಡುಕೊಳ್ಳುತ್ತಿದೆ ಎಂದು ಸಚಿವ ವೈಷ್ಣವ್ ಹೇಳಿದರು.
ಆನ್ಲೈನ್ ಮನಿ ಗೇಮಿಂಗ್ನಿಂದ ಕೋಟ್ಯಂತರ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟವನ್ನು ನಿವಾರಿಸಲು ಕೇಂದ್ರ ಸರ್ಕಾರ ಅತ್ಯಂತ ಕಠಿಣ ಕಾನೂನು ಜಾರಿಗೆ ತಂದಿದೆ ಎಂದು ಅವರು ಮಾಹಿತಿ ನೀಡಿದರು.
ಸಾಮಾಜಿಕ ಮಾಧ್ಯಮವು ಪ್ರತಿಯೊಬ್ಬ ನಾಗರಿಕನಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ವೇದಿಕೆ ಒದಗಿಸಿರುವುದು ಸತ್ಯವಾದರೂ, ಅದರ ದುರುಪಯೋಗವನ್ನು ತಡೆಯುವ ಅಗತ್ಯ ಈಗ ಹೆಚ್ಚಾಗಿದೆ. ಸಮಾಜದ ಅಡಿಪಾಯ ಬಲಪಡಿಸಲು ಹಾಗೂ ನಂಬಿಕೆಯನ್ನು ಕಾಪಾಡಲು ಸರ್ಕಾರ ಬದ್ದವಾಗಿದೆ ಎಂದು ಅಶ್ವಿನಿ ವೈಷ್ಣವ್ ಲೋಕಸಭೆಗೆ ತಿಳಿಸಿದರು.











