ತಾಜಾ ಸುದ್ದಿ ರಾಜಕೀಯ ಕ್ರೈಂ ನ್ಯೂಸ್ ರಾಜ್ಯ-ಜಿಲ್ಲೆ ದೇಶ-ವಿದೇಶ ಸೋಷಿಯಲ್ ಮೀಡಿಯಾ ಮನರಂಜನೆ ಕಾನೂನು ಜೀವನಶೈಲಿ ಕ್ರೀಡೆ ಗುರುಪರಂಪರೆ ವಿಡೀಯೋ English News

ಫಾಕ್ಸ್‌ಕಾನ್ ಉದ್ಯೋಗಕ್ಕೆ ಶ್ರೇಯಸ್ಸು ಯಾರಿಗೆ? ರಾಹುಲ್ ಶ್ಲಾಘನೆಗೆ ಮೋದಿ ‘ಮೇಕ್ ಇನ್ ಇಂಡಿಯಾ’ ಎಂದ ಅಶ್ವಿನಿ

On: December 25, 2025 8:57 PM
Follow Us:

ಬೆಂಗಳೂರು: ಕರ್ನಾಟಕದಲ್ಲಿ ಫಾಕ್ಸ್‌ಕಾನ್ ಕಂಪನಿ ಕೇವಲ 8–9 ತಿಂಗಳಲ್ಲಿ ಐಫೋನ್ ಉತ್ಪಾದನಾ ಘಟಕ ಆರಂಭಿಸಿ ಸುಮಾರು 30,000 ಸಿಬ್ಬಂದಿಯನ್ನು ನೇಮಿಸಿಕೊಂಡಿರುವುದನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶ್ಲಾಘಿಸಿದ್ದಾರೆ. ಈ ಸಾಧನೆಯನ್ನು ‘ಭಾರತದಲ್ಲಿ ಕಂಡ ಅತ್ಯಂತ ವೇಗದ ಕಾರ್ಖಾನೆ ರ್ಯಾಂಪ್-ಅಪ್’ ಎಂದು ಅವರು ಬಣ್ಣಿಸಿದ್ದಾರೆ.

ದೇವನಹಳ್ಳಿ ಸಮೀಪದ ಫಾಕ್ಸ್‌ಕಾನ್ ಘಟಕದಲ್ಲಿ ನೇಮಿಸಲಾದ ಉದ್ಯೋಗಿಗಳಲ್ಲಿ ಶೇ.80ರಷ್ಟು ಮಹಿಳೆಯರಾಗಿದ್ದು, ಬಹುತೇಕರು 19 ರಿಂದ 24 ವರ್ಷ ವಯಸ್ಸಿನವರು. ಅನೇಕ ಮಹಿಳೆಯರಿಗೆ ಇದು ಮೊದಲ ಉದ್ಯೋಗವಾಗಿರುವುದು ಗಮನಾರ್ಹ ಸಂಗತಿ ಎಂದು ರಾಹುಲ್ ಗಾಂಧಿ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.

“ಇದು ಕೇವಲ ಅಂಕಿಅಂಶವಲ್ಲ. ಇದು ಪರಿವರ್ತನಾತ್ಮಕ ಉದ್ಯೋಗ ಸೃಷ್ಟಿ. ಉತ್ಪಾದನೆಯು ಈ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಬೆಳೆಯಲು ಅನುಕೂಲವಾದ ಪರಿಸರವನ್ನು ಕರ್ನಾಟಕ ನಿರ್ಮಿಸಿದೆ. ಘನತೆಯೊಂದಿಗೆ ಉದ್ಯೋಗಗಳು ಮತ್ತು ಎಲ್ಲರಿಗೂ ಅವಕಾಶಗಳು ಸಿಗುವ ಭಾರತವನ್ನು ನಾವು ನಿರ್ಮಿಸಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಯಶಸ್ಸು ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಯಶಸ್ಸನ್ನು ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದಗಳು ರಾಹುಲ್ ಗಾಂಧಿ. ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಕಾರ್ಯಗತಗೊಳಿಸುತ್ತಿರುವುದರಿಂದ ಭಾರತ ಇಂದು ಉತ್ಪಾದಕ ಆರ್ಥಿಕತೆಯಾಗುತ್ತಿದೆ” ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಥೈವಾನ್ ಮೂಲದ ಫಾಕ್ಸ್‌ಕಾನ್ ಕಂಪನಿ ಆ್ಯಪಲ್‌ನ ಐಫೋನ್‌ಗಳ ಉತ್ಪಾದನಾ ಗುತ್ತಿಗೆ ಹೊಂದಿದ್ದು, ಚೀನಾದಿಂದ ಭಾರತಕ್ಕೆ ಉತ್ಪಾದನೆಯನ್ನು ಹಂತ ಹಂತವಾಗಿ ಸ್ಥಳಾಂತರಿಸಲಾಗುತ್ತಿದೆ. ಕಳೆದ 12 ತಿಂಗಳಲ್ಲಿ ಭಾರತದಲ್ಲಿ ಸುಮಾರು 22 ಬಿಲಿಯನ್ ಡಾಲರ್ ಮೌಲ್ಯದ ಐಫೋನ್‌ಗಳನ್ನು ಜೋಡಣೆ ಮಾಡಲಾಗಿದ್ದು, ಜಾಗತಿಕವಾಗಿ ಆ್ಯಪಲ್ ಉತ್ಪಾದಿಸುವ ಐಫೋನ್‌ಗಳ ಪೈಕಿ ಶೇ.20ರಷ್ಟು ಈಗ ಭಾರತದಲ್ಲೇ ತಯಾರಾಗುತ್ತಿವೆ.

ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಉದ್ಯೋಗ ವಾತಾವರಣವನ್ನು ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರೆ, ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಯೋಜನೆಯ ಫಲಿತಾಂಶವೆಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ, ಫಾಕ್ಸ್‌ಕಾನ್‌ನಂತಹ ದೊಡ್ಡ ಕಂಪನಿಗಳ ಹೂಡಿಕೆ ಭಾರತದಲ್ಲಿ ಉತ್ಪಾದನಾ ಕ್ಷೇತ್ರದ ವೇಗದ ಬೆಳವಣಿಗೆಯನ್ನು ಸ್ಪಷ್ಟಪಡಿಸುತ್ತಿದೆ.

K.M.Sathish Gowda

Join WhatsApp

Join Now

Facebook

Join Now

Leave a Comment