ಕಲಬುರಗಿ, ನವೆಂಬರ್ 13: ಚಿತ್ತಾಪುರದಲ್ಲಿ ನವೆಂಬರ್ 16ರಂದು ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿದೆ. ಒಟ್ಟು 350 ಮಂದಿ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಇವರಲ್ಲಿ 300 ಕಾರ್ಯಕರ್ತರು ಹಾಗೂ 50 ಬ್ಯಾಂಡ್ ವಾದಕರು ಇರಲಿದ್ದಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಲಬುರಗಿ ವಿಭಾಗೀಯ ಪೀಠದಲ್ಲಿ ಗುರುವಾರ ಮಧ್ಯಾಹ್ನ ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ನ್ಯಾಯಪೀಠವು ನವೆಂಬರ್ 16ರಂದು ಮಧ್ಯಾಹ್ನ 3.30ರಿಂದ ಸಂಜೆ 5.45ರವರೆಗೆ ಪಥಸಂಚಲನ ನಡೆಸಲು ಅವಕಾಶ ನೀಡಿದೆ. ಪಥಸಂಚಲನಕ್ಕೆ ಅನುಮತಿ ನೀಡಿರುವ ಬಗ್ಗೆ ಜಿಲ್ಲಾಡಳಿತ ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.
ಹೈಕೋರ್ಟ್ ಆದೇಶದ ಪ್ರಕಾರ, ಪಥಸಂಚಲನದಲ್ಲಿ ನಿಗದಿತ ಸಂಖ್ಯೆಯ ಹೊರತಾಗಿ ಹೆಚ್ಚುವರಿ ಜನರು ಭಾಗವಹಿಸುವಂತಿಲ್ಲ. ಶಿಸ್ತಿನ ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.
ಶಾಂತಿ ಸಭೆಗಳ ನಂತರ ಅಂತಿಮ ನಿರ್ಧಾರ
ಪಥಸಂಚಲನಕ್ಕೆ ಮುನ್ನ ಕಲಬುರಗಿಯಲ್ಲಿ ನಡೆದ ಶಾಂತಿ ಸಭೆ ಫಲಪ್ರದವಾಗದ ಹಿನ್ನೆಲೆಯಲ್ಲಿ, ಹೈಕೋರ್ಟ್ ನಿರ್ದೇಶನದಂತೆ ಎಜೆ ಶಶಿಕಿರಣ್ ಶೆಟ್ಟಿ ಅವರ ಬೆಂಗಳೂರಿನ ಕಚೇರಿಯಲ್ಲಿ ಎರಡನೇ ಶಾಂತಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿತ್ತು. ಆರ್‌ಎಸ್‌ಎಸ್ ಮುಖಂಡರು ನವೆಂಬರ್ 13 ಅಥವಾ 16ರಂದು ಪಥಸಂಚಲನಕ್ಕೆ ಅವಕಾಶ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು.
ಅದರ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಹೈಕೋರ್ಟ್ ವಿಚಾರಣೆ ನಡೆಸಿ ನವೆಂಬರ್ 16ರಂದು ಪಥಸಂಚಲನಕ್ಕೆ ಅಂತಿಮ ಅನುಮತಿ ನೀಡಿದೆ.
ಕೋರ್ಟ್ ತೀರ್ಪಿಗೂ ಮುನ್ನವೇ ತಹಸೀಲ್ದಾರ್ ಅನುಮತಿ
ಕೋರ್ಟ್ ತೀರ್ಪು ಬರುವ ಮೊದಲುಲೇ ಚಿತ್ತಾಪುರ ತಹಸೀಲ್ದಾರ್ ನಾಗಯ್ಯ ಸ್ವಾಮಿ ಅವರು ನವೆಂಬರ್ 12ರಂದು ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ್ದರು. ಆ ಆದೇಶದ ಪ್ರತಿ ಇಂದು ಹೈಕೋರ್ಟ್‌ಗೆ ಅಡ್ವೋಕೇಟ್ ಜನರಲ್ ಸಲ್ಲಿಸಿದರು.
ಅಕ್ಟೋಬರ್ 13ರಂದು ಆರ್‌ಎಸ್‌ಎಸ್ ಪಥಸಂಚಲನಕ್ಕೆ ಮೊದಲ ಅರ್ಜಿ ಸಲ್ಲಿಸಲಾಗಿತ್ತು. ನಂತರ ತಹಸೀಲ್ದಾರ್‌ರಿಂದ ಹೆಚ್ಚಿನ ವಿವರ ಕೇಳಲಾಗಿತ್ತು. ಬಳಿಕ ಅಕ್ಟೋಬರ್ 19ರಂದು ಮರುಅರ್ಜಿಯೂ ಸಲ್ಲಿಸಲಾಯಿತು. ಸುಮಾರು ಒಂದು ತಿಂಗಳ ಬಳಿಕ ತಹಸೀಲ್ದಾರ್ ಪಥಸಂಚಲನಕ್ಕೆ ಅವಕಾಶ ನೀಡಿದರು.
ಮೊದಲ ಅನುಮತಿಯಲ್ಲಿ 300 ಗಣವೇಷಧಾರಿಗಳು ಮತ್ತು 25 ಬ್ಯಾಂಡ್ ಸದಸ್ಯರು ಮಾತ್ರ ಭಾಗವಹಿಸಲು ಸೂಚಿಸಲಾಗಿತ್ತು. ಆದರೆ, ಅರ್ಜಿದಾರ ಪರ ವಕೀಲ ಅರುಣ್ ಶ್ಯಾಮ್ ಅವರ ಮನವಿ ಮೇರೆಗೆ ಬ್ಯಾಂಡ್ ಸದಸ್ಯರ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲಾಗಿದೆ.
ಹೀಗಾಗಿ, ಒಟ್ಟು 350 ಮಂದಿ ನವೆಂಬರ್ 16ರಂದು ಚಿತ್ತಾಪುರದಲ್ಲಿ ನಡೆಯುವ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ.











